ಡರ್ಬಿಷೈರ್ -
ಉತ್ತರ ಇಂಗ್ಲೆಂಡಿನ ಮಧ್ಯಭಾಗದಲ್ಲಿರುವ ಒಂದು ಕೌಂಟಿ (ಆಡಳಿತ ವಿಭಾಗ). ಪೂರ್ವದಲ್ಲಿ ನಾಟಿಂಗ್‍ಹ್ಯಮ್‍ಷೈರ್ ಮತ್ತು ಲೆಸ್ಟರ್‍ಷೈರ್, ಪಶ್ಚಿಮದಲ್ಲಿ ಸ್ಟ್ಯಾಫರ್ಡ್‍ಷೈರ್ ಮತ್ತು ಚೆಷೈರ್, ಈಶಾನ್ಯದಲ್ಲಿ ಯಾರ್ಕ್‍ಷೈರ್ ಇವೆ. ವಿಸ್ತೀರ್ಣ 1,005 ಚ.ಮೈ. ಡರ್ಬಿಷೈರ್‍ನ ಉತ್ತರ ಭಾಗ ಉನ್ನತ ಸೀಮೆ; ಪೆನ್ನೈನ್ ಪರ್ವತಗಳ ದಕ್ಷಿಣ ತುದಿ. ದಕ್ಷಿಣದಲ್ಲಿ ಡರ್ಬಿಯ ಸುತ್ತಣ ಪ್ರದೇಶ ಮೈದಾನ. ಭೂಸವೆತಕ್ಕೆ ಒಳಗಾಗಿರುವ ಉತ್ತರ ಭಾಗದ ಮಧ್ಯದಲ್ಲಿ ಕಾರ್ಬನಿಫರಸ್ ಸುಣ್ಣಕಲ್ಲಿನ ಪ್ರದೇಶವಿದೆ. ಈ ಪ್ರಸ್ಥಭೂಮಿ ಪ್ರದೇಶದ ಸರಾಸರಿ ಎತ್ತರ 1,000’. ಇಲ್ಲಿ ಹರಿಯುವ ವೈ ಮತ್ತು ಡೌ ನದಿಗಳು ಟ್ರೆಂಟ್ ನದಿಯ ಉಪನದಿಗಳು. ದಕ್ಷಿಣದ ತಗ್ಗಾದ ಮೈದಾನ ಟ್ರೆಂಟ್ ನದೀ ಕಣಿವೆಯ ಭಾಗ. ಇಲ್ಲಿ ಹರಿಯುವ ಡವೆರ್ಂಟ್ ಮತ್ತು ಎರ್‍ವಾಷ್ ನದಿಗಳು ಟ್ರೆಂಟ್ ನದಿಯನ್ನು ಸೇರುತ್ತವೆ. ರೋತರ್, ಗಾಯ್ಟ್ ಇನ್ನೆರಡು ನದಿಗಳು.

ಉತ್ತರದ ಉನ್ನತ ಪ್ರದೇಶದಲ್ಲಿ ಚಳಿಗಾಲ ತೀವ್ರ. ಮಳೆಯೂ ಅಧಿಕ. ಸರಾಸರಿ ಮಳೆ ಉತ್ತರದ ವೂಡ್‍ಹೆಡ್‍ನಲ್ಲಿ 52.03". ದಕ್ಷಿಣದ ಡರ್ಬಿಯಲ್ಲಿ 25.50". ಬಕ್ಸ್‍ಟನ್‍ನಲ್ಲಿ ಜನವರಿಯ ಸರಾಸರಿ ಉಷ್ಣತೆ 36.10 ಈ ಡರ್ಬಿಯಲ್ಲಿ 39.40 ಈ; ಜುಲೈ ತಿಂಗಳಲ್ಲಿ ಅನುಕ್ರಮವಾಗಿ 57.60 ಈ ಮತ್ತು 600 ಈ 

ಡರ್ಬಿ ಕೌಂಟಿಬರೊವನ್ನು ಬಿಟ್ಟು ಉಳಿದ ಪ್ರದೇಶದ ವಿಸ್ತೀರ್ಣ 993 ಚ.ಮೈ., ಜನಸಂಖ್ಯೆ 8,84,339 (1971). ಕೌಂಟಿಯ ಆಡಳಿತಕೇಂದ್ರ ಡರ್ಬಿ (2,19,348). ಡರ್ಬಿಷೈರ್‍ನಲ್ಲಿರುವ ಮುನಿಸಿಪಲ್ ಬರೋಗಳು ಬಕ್ಸ್‍ಟನ್, ಚೆಸ್ಟರ್‍ಫೀಲ್ಡ್, ಗ್ಲಾಸಪ್ ಮತ್ತು ಇಲ್ಕಸ್ಟನ್. ಈ ಕೌಂಟಯಲ್ಲಿ 16 ಜಿಲ್ಲೆಗಳೂ 9 ಗ್ರಾಮಾಂತರ ಜಿಲ್ಲೆಗಳೂ ಇವೆ.
ಕೌಂಟಿಯಲ್ಲಿ 5,00,000 ಎಕರೆಗಳು ವ್ಯವಸಾಯಕ್ಕೆ ಮೀಸಲು. ಇದರಲ್ಲಿ ಮುಕ್ಕಾಲು ಭಾಗಕ್ಕಿಂತ ಹೆಚ್ಚು ನೆಲ ಕೃಷಿಯೋಗ್ಯವಲ್ಲ. ಗೋದಿ, ಓಟ್ಸ್ ಮುಖ್ಯ ಬೆಳೆಗಳು. 1,80,000 ದನಗಳಿವೆ. ಇವುಗಳಲ್ಲಿ ಅರ್ಧದಷ್ಟು ಸಂಖ್ಯೆ ಹೈನಿಗಾಗಿ ಮೀಸಲಾಗಿದೆ. ಇಲ್ಲಿ ಕುರಿಗಳನ್ನೂ ಸಾಕುತ್ತಾರೆ.

ಈ ಕೌಂಟಿಯಲ್ಲಿ ಹಿಂದಿನಿಂದಲೂ ಗಣಿಗಾರಿಕೆ ಮತ್ತು ಕೈಗಾರಿಕೆ ಮುಖ್ಯವಾಗಿವೆ. ರೋಮನರ ಕಾಲದಲ್ಲಿ ಸೀಸದ ಗಣಿಗಳಿದ್ದುವು. ಕಬ್ಬಿಣವನ್ನು ಹಿಂದಿನಿಂದಲೂ ಉತ್ಪಾದಿಸಲಾಗುತ್ತಿದೆ. 14ನೆಯ ಶತಮಾನದಿಂದ ಕಲ್ಲಿದ್ದಲನ್ನು ತೆಗೆಯಲಾಗುತ್ತಿದೆ. ಉಣ್ಣೆ ಕೈಗಾರಿಕೆ ಹಳೆಯದು. ಪಿಂಗಾಣಿ, ಕಾಗದ ರಸಾಯನ, ಎಂಜಿನಿಯರಿಂಗ್-ಇವು ಇತರ ಮುಖ್ಯ ಕೈಗಾರಿಕೆಗಳು. ಬಕ್ಸ್‍ಟನ್, ಮ್ಯಾಟ್ಲಾಕ್ ಮತ್ತು ಬೇಕ್‍ವೆಲ್‍ನಲ್ಲಿರುವ ಖನಿಜಜಲ ಚಿಲುಮೆಗಳು ಪ್ರಸಿದ್ಧವಾದವು. ಡರ್ಬಿ ಒಂದು ಮುಖ್ಯ ರೈಲ್ವೆ ಕೇಂದ್ರ. ಇಲ್ಲಿ ಒಂದು ದೊಡ್ಡ ರೈಲ್ವೆ ಕಾರ್ಯಾಗಾರವುಂಟು. 

ಲಂಡನ್-ಡರ್ಬಿ-ಮ್ಯಾಂಚೆಸ್ಟರ್ ರೈಲುಮಾರ್ಗ ಡರ್ಬಿಷೈರ್‍ನಲ್ಲಿ ಡರ್ಬಿಯ ಮುಖಾಂತರ ದಕ್ಷಿಣದಿಂದ ಉತ್ತರಕ್ಕೆ ಹಾದುಹೋಗುತ್ತದೆ. ಇದಲ್ಲದೆ ಡರ್ಬಿಯಿಂದ ಮ್ಯಾಂಚೆಸ್ಟರ್ ಮತ್ತು ಷೆಫೀಲ್ಡ್‍ಗೆ ಹೆದ್ದಾರಿಗಳುಂಟು. ಡರ್ಬಿಷೈರ್ ಕೌಂಟಿಯಲ್ಲಿ 1,500 ಮೈ. ಉದ್ದದ ಉತ್ತಮ ರಸ್ತೆಗಳಿವೆ. ಟ್ರೆಂಟ್ ಮತ್ತು ಮರ್ಸಿ ಕಾಲುವೆ ವ್ಯವಸ್ಥೆಯ ಜಲಮಾರ್ಗಗಳಿವೆ. ಡರ್ಬಿಯ ವಿಮಾನ ನಿಲ್ದಾಣ ಬರ್ನಾಸ್ಟನ್. ಇದು ಇರುವುದು ಡರ್ಬಿಯ ನೈಋತ್ಯಕ್ಕೆ 1 ಮೈ. ದೂರದಲ್ಲಿ.
(ಎಸ್.ಕೆಆರ್.; ಆರ್.ಸಿಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ